ವರಾಹ ಮಿಹಿರ
	ಸು.6ನೆಯ ಶತಮಾನ. ಭಾರತದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಹಾಗೂ ಖಗೋಳ ವಿಜ್ಞಾನಿ. ಬೃಹತ್ಸಂಹಿತೆ ಎಂಬ ಶಾಸ್ತ್ರಗ್ರಂಥದ ಕರ್ತೃ. ಆರ್ಯಭಟನ ಸಮಕಾಲೀನ. ಉಜ್ಜಯನಿಯ ಅವಂತೀನಗರ ಇವನ ವಾಸಸ್ಥಾನವಾಗಿತ್ತು. ಇವನ ಪೂರ್ವಿಕರು ಸೂರ್ಯನ ಆರಾಧಕರು. ವೇದಾಧ್ಯಯನ ಇವನ ಆಸಕ್ತಿಯ ವಿಷಯವಾಗಿತ್ತು. ಈತ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ. 5 ಮತ್ತು 6ನೆಯ ಶತಮಾನಗಳ ಸಂಧಿಕಾಲದಲ್ಲಿ ಆರ್ಯಭಟ, ಲಾಟದೇವ ಮೊದಲಾದವರಿಂದ ಪರಿಷ್ಕರಣೆಗೊಂಡು ರಚಿತವಾದ ಪೂರ್ವಿಕರ ಮತಗಳ ಸಿದ್ಧಾಂತಗಳನ್ನು ಐತಿಹಾಸಿಕ ದೃಷ್ಟಿಯಿಂದ ಅಧ್ಯಯನ ಮಾಡಿ, ಅವುಗಳನ್ನು ಕ್ರೋಢೀಕರಿಸಿ ತನ್ನದೇ ಆದ ದೃಷ್ಟಿಕೋನದಿಂದ ಅವುಗಳ ಮಹತ್ವವನ್ನು ಪ್ರತಿಪಾದಿಸಿದ ಕೀರ್ತಿ ವರಾಹ ಮಿಹಿರನದು. ಇವನ ಇಂಥ ಕಾರ್ಯದಿಂದ ಹಿಂದಿನ ಜ್ಞಾನಕ್ಷೇತ್ರ ಯಾವುದೇ ರೀತಿಯಲ್ಲಿ ನಷ್ಟವಾಗದೆ ಕ್ಷೇಮವಾಗಿ ಉಳಿದುಬರಲು ಸಾಧ್ಯವಾಯಿತು. ಈ ಕಾರಣದಿಂದಲೇ ಇವನ ಕೃತಿಗಳಿಗೆ ಐತಿಹಾಸಿಕ ಮಹತ್ವವಿದೆ. 

	ಪಂಚಸಿದ್ಧಾಂತಿಕಾ, ಬೃಹಜ್ಜಾತಕ, ಯೋಗಯಾತ್ರಾ, ವಿವಾಹಪಟಲ ಮೊದಲಾದವು ಇವನ ಇತರ ಮುಖ್ಯ ಕೃತಿಗಳು. ಪಂಚಸಿದ್ಧಾಂತಿಕಾದಲ್ಲಿ 18 ಅಧ್ಯಾಯಗಳಿವೆ. ಗ್ರಹಗಳ ಸ್ಥಾನಗಳನ್ನು ನಿರ್ದೇಶಮಾಡಲು ಅನುಕೂಲವಾದ ಗ್ರಹಗಣಿತ, ಗ್ರಹಗಳ ವಿಚಾರ, ಸೌರ, ಪೈತಾಮಹ (ಬ್ರಾಹ್ಮ), ವಾಸಿಷ್ಠ, ರೋಮಕ, ಪೌಲಿಶಗಳೆಂಬ ಐದು ಸಿದ್ಧಾಂತಗಳನ್ನೂ ಖಗೋಳವಿಜ್ಞಾನದ ಗ್ರಂಥಗಳನ್ನು ವರ್ಣಿಸಿ ಅವುಗಳ ಸೂತ್ರಗಳ ಪ್ರಕಾರ ಕರಣಗಳನ್ನು (ಗಣಕ) ಈ ಕೃತಿಯು ತಿಳಿಸುವುದರಿಂದ ಪಂಚಸಿದ್ಧಾಂತಿಕಾ ಎಂಬ ಹೆಸರು ಅನ್ವರ್ಥವಾಗಿದೆ. ಬೃಹಜ್ಜಾತಕ ಹೆಸರೇ ಸೂಚಿಸುವಂತೆ ಜಾತಕವನ್ನೂ ಫಲಭಾಗವನ್ನೂ ತಿಳಿಸುವ 26 ಅಧ್ಯಾಯಗಳ ಬೃಹತ್ ಗ್ರಂಥ. ರಾಶಿಭೇದ, ಜನ್ಮವಿಧಿ, ಬಾಲಾರಿಷ್ಟ ಮೊದಲಾದ ವಿಚಾರಗಳು ಇಲ್ಲಿ ಬರುತ್ತವೆ. ಪೂರ್ವಾಚಾರ್ಯರಿಂದ ರಚನೆಗೊಂಡ ಗ್ರಂಥಗಳನ್ನು ಸಂಗ್ರಹಿಸಿ ಇದನ್ನು ಬರೆಯಲಾಗಿದೆ. ನಷ್ಟಜಾತಕವೆಂಬ ಭಾಗದಲ್ಲಿ ಜಾತಕವಿಲ್ಲದಿರುವವರಿಗೆ ಫಲವನ್ನು ಹೇಳಿ, ಜಾತಕವನ್ನು ನಿರ್ಮಿಸುವ ಬಗೆಯನ್ನೂ ತಿಳಿಸಲಾಗಿದೆ. ಇದರ ಸಂಕ್ಷಿಪ್ತ ರೂಪವನ್ನು ಲಘುಜಾತಕ ಎಂಬ ಹೆಸರಿನಿಂದ ಇವನೇ ರಚಿಸಿದ್ದಾನೆ. ಯಾತ್ರೆಗಳಿಗೆ ಅನುಕೂಲವಾಗುವ ಶುಭಕಾಲನಿರ್ಣಯಾದಿಗಳನ್ನೊಳಗೊಂಡದ್ದು ಇವನ ಯೋಗಯಾತ್ರಾ ಕೃತಿ. ವಿವಾಹಾದಿಗಳಿಗೆ ಸಂಬಂಧಪಟ್ಟ ವಿಚಾರಗಳು ವಿವಾಹಪಟಲ ಎಂಬ ಜ್ಯೋತಿಷ್ಯಗ್ರಂಥದಲ್ಲಿದೆ. 

	ಬೃಹತ್ಸಂಹಿತೆಗೆ ವಾರಾಹಸಂಹಿತೆ ಎಂಬ ಹೆಸರೂ ಇದೆ. ಇದು ತಂತ್ರ, ಹೋರಾ, ಶಾಖಾ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ. ಇವನ ಕೃತಿಗಳ ಅನೇಕ ಭಾಗಗಳಲ್ಲಿ ಗ್ರೀಕ್ ಪದಗಳ ಬಳಕೆಯನ್ನು ವಿದ್ವಾಂಸರು ಗುರುತಿಸಿ ಗ್ರೀಕ್ ಪ್ರಭಾವ ಇವನ ಮೇಲಾಗಿದೆ ಎಂದು ಹೇಳಿದ್ದಾರೆ. ಸ್ಕಂದಗಣಿತವನ್ನು ಅವಲಂಭಿಸಿದ ಗ್ರಹಗತಿಗಳನ್ನೂ ಲಗ್ನವನ್ನು ಕಂಡುಹಿಡಿಯುವ ಕ್ರಮಗಳನ್ನೂ ಈ ಕೃತಿ ವಿವರಿಸುತ್ತದೆ. 106 ಅಧ್ಯಾಯಗಳನ್ನೊಳಗೊಂಡು 4000 ಶ್ಲೋಕಗಳಿಂದ ರಚನೆಗೊಂಡಿರುವ ಈ ಕೃತಿ ವಿಷಯ ಹಾಗೂ ಸ್ವರೂಪದಲ್ಲಿ ವಿಶ್ವಕೋಶದ ಮಾದರಿಯನ್ನು ಹೊಂದಿದೆ. ಈ ಗ್ರಂಥವನ್ನು ಆಧರಿಸಿ ಭಾರತೀಯ ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡಿವೆ. ಕನ್ನಡದಲ್ಲಿ ಎರಡನೆಯ ಚಾವುಂಡರಾಯ (ಸು.1025) ಲೋಕೋಪಕಾರ ಎಂಬ ಕೃತಿಯನ್ನು ರಚಿಸಿದ್ದಾನೆ. 

	ಈತ ತನ್ನ ಅಪಾರ ಜ್ಞಾನಪ್ರೌಢಿಮೆಯಿಂದ ಧನ್ವಂತರಿ ಹಾಗೂ ಕಾಳಿದಾಸರಂತೆ ಸಂಸ್ಕøತ ಸಾಹಿತ್ಯದ ಅಮೂಲ್ಯ ರತ್ನವೆನಿಸಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
					
							*